ಚಿತ್ತಗಾಂಗ್  ಬಾಂಗ್ಲಾದೇಶದ ಮುಖ್ಯ ರೇವುಪಟ್ಟಣ. ಅದೇ ಹೆಸರಿನ ಜಿಲ್ಲೆಯ ಹಾಗೂ ವಿಭಾಗದ ಆಡಳಿತ ಕೇಂದ್ರ. ಉ.ಅ.220 2 ಮತ್ತು ಪೂ.ರೇ.910 50 ಮೇಲೆ, ಕರ್ನಫೂಲಿ ನದೀಮುಖದಿಂದ 12ಮೈ. ಹಿಂದೆ, ಅದರ ಬಲದಂಡೆಯ ಮೇಲಿದೆ. ಜನಸಂಖ್ಯೆ 6,80,000 (1972ರ ಅಂದಾಜು). ಹಸಿರು ತುಂಬಿದ ಗುಡ್ಡ ಬಯಲುಗಳ ನಡುವೆ ನಿರ್ಮಿತವಾದ ಈ ನಗರ ಸುಂದರವಾಗಿದೆ. ಇಲ್ಲಿಯದು ಆರೋಗ್ಯಕರ ವಾಯುಗುಣ. ಸಮುದ್ರದ ಮೇಲಿಂದ ಬೀಸುವ ಗಾಳಿಯಿಂದಾಗಿ ಹವ ತಂಪಾಗಿರುತ್ತದೆ. ಇಲ್ಲಿಂದ ಢಾಕಾ ನಗರಕ್ಕೆ ಕೋಮಿಲ್ಲದ ಮೂಲಕ ರೈಲ್ವೆ ಸಂಪರ್ಕವೂ ಢಾಕಾ, ಕಾಕ್ಸ್ ಬಜಾರ್, ರಂಗೂನ್, ಕಲ್ಕತ್ತಗಳಿಗೆ ವಿಮಾನ ಸಂಪರ್ಕವೂ ಉಂಟು. ಇಲ್ಲಿಯ ಬಂದರು ಉತ್ತಮವಾದ್ದು. ಇದೊಂದು ನೈಸರ್ಗಿಕ ಬಂದರು. ಚಹ, ಸಣಬು ಮತ್ತು ಸಣಬು ಉತ್ಪನ್ನಗಳು ಇಲ್ಲಿಂದ ರಫ್ತಾಗುತ್ತವೆ. ಇದು ವಾರ್ಷಿಕವಾಗಿ 20,000 ಟನ್‍ಗಳಷ್ಟು ಸರಕು ಸಾಗಣೆ ನಿರ್ವಹಿಸಬಲ್ಲುದು. ಏಕಕಾಲದಲ್ಲಿ ಇಪ್ಪತ್ತು ಹಡಗುಗಳು ನಿಲ್ಲಲು ಸೌಲಭ್ಯವುಂಟು.

	ಬಂದರಿನ ಪಕ್ಕದಲ್ಲೇ ಚಿತ್ತಗಾಂಗ್ ನಗರ ಬೆಳೆದಿದೆ. ಹಿಂದೆ ಪೋರ್ಚುಗೀಸರ ಕೋಟೆ ಇದ್ದೆಡೆಯಲ್ಲಿ ನ್ಯಾಯಾಲಯದ ಕಟ್ಟಡವಿದೆ. ಜುಮಾ ಮಸೀದಿ ಇನ್ನೊಂದು ಮುಖ್ಯ ಕಟ್ಟಡ. ಬಂಗಾಲದಲ್ಲಿ ಮೊಗಲರ ಗವರ್ನರಾಗಿದ್ದ ಷಯಿಸ್ತಾಖಾನ್ ಇದನ್ನು ಕಟ್ಟಿಸಿದ. ಇದೊಂದು ವಿಶ್ವವಿದ್ಯಾಲಯ ಕೇಂದ್ರ. ಚಿತ್ತಗಾಂಗ್ ಕಾಲೇಜು, ಸರ್ಕಾರಿ ವಾಣಿಜ್ಯ ಕಾಲೇಜು, ಮಹಿಳೆಯರ ಕಾಲೇಜು, ನ್ಯಾಯಶಾಸ್ತ್ರ ಕಾಲೇಜು-ಇವು ಇಲ್ಲಿಯ ಕಾಲೇಜುಗಳಲ್ಲಿ ಕೆಲವು. ಚಿತ್ತಗಾಂಗಿಗೆ 5 ಮೈ. ದೂರದಲ್ಲಿರುವ ಫೌಜ್‍ದರ್ಹತ್‍ನಲ್ಲಿ ಸೈನಿಕ ಕಾಲೇಜೊಂದಿದೆ. ಚಿತ್ತಗಾಂಗಿನ ಕೈಗಾರಿಕಾ ವಲಯ ನಗರದ ಉತ್ತರದಲ್ಲಿದೆ. ಇಲ್ಲಿ ಹತ್ತಿ ಮತ್ತು ಸಣಬು ಗಿರಣಿಗಳೂ ಚಹ ಮತ್ತು ಬೆಂಕಿಕಡ್ಡಿ ಕಾರ್ಖಾನೆಗಳೂ ಎಂಜಿನಿಯರಿಂಗ್ ಕೈಗಾರಿಕೆಗಳೂ ಇವೆ. ಇದಕ್ಕೆ 10ಮೈ. ದೂರದಲ್ಲಿ ರೈಲ್ವೆ ಕಾರ್ಯಾಗಾರವಿದೆ. ಚಿತ್ತಗಾಂಗ್ ಬಾಂಗ್ಲಾದೇಶದ ವಿದೇಶಿ ವ್ಯಾಪಾರ ಕೇಂದ್ರ. ನಗರದಲ್ಲಿರುವ ಬತಾಲಿ ಗುಡ್ಡ ಒಂದು ವಿಹಾರ ಸ್ಥಳ. ಚಿತ್ತಗಾಂಗೆ 8 ಮೈ. ದೂರದಲ್ಲಿರುವ ಬಾಯಾಜಿದ್ ಒಂದು ಯಾತ್ರಾಸ್ಥಳ.

	ಚಿತ್ತಗಾಂಗ್ ನಗರದ ಇತಿಹಾಸ 8ನೆಯ ಶತಮಾನದಷ್ಟು ಹಳೆಯದು. ಇದು ಮೂಲತಃ ಒಂದು ಹಿಂದೂರಾಜ್ಯಕ್ಕೆ ಸೇರಿತ್ತೆಂದು ತಿಳಿದುಬರುತ್ತದೆ. ಒಂಬತ್ತನೆಯ ಶತಮಾನದಲ್ಲಿ ಇದನ್ನು ಅರಕಾನೀಸರು ವಶಪಡಿಸಿಕೊಂಡರು. 10ನೆಯ ಶತಮಾನದಿಂದ ಅರಬ್ ನಾವಿಕರು ಈ ರೇವಿನೊಂದಿಗೆ ಸಂಪರ್ಕ ಪಡೆದಿದ್ದರು. ಇದನ್ನು ಟ್ಸಿಟಗಾಂಗ್, ಚಾತಿಗ್ರಾಮ ಅಥವಾ ಚಾತ್ ಗಾವ್ ಎಂದು ಕರೆಯಲಾಗಿದೆ ಇದನ್ನು 14ನೆಯ ಶತಮಾನದಲ್ಲಿ (1338) ಮುಸ್ಲಿಮರು ವಶಪಡಿಸಿಕೊಂಡರು. ಆದರೆ ಅರಕಾನೀಸರು ಇದನ್ನು ಪುನಃ ಪಡೆದುಕೊಂಡರು.

	1512ರಲ್ಲಿ ಬಂಗಾಲದ ಸುಲ್ತಾನನಾಗಿದ್ದ ಅಲಾ-ಅಲ್-ದೀನ್ ಹುಸೇನ್ ಷಾ ಈ ಪಟ್ಟಣವನ್ನು ಅರಕಾನೀಸರಿಂದ ವಶಪಡಿಸಿಕೊಂಡು ಅದಕ್ಕೆ ಪಥಾಬಾದ್ ಎಂಬ ಹೆಸರಿಟ್ಟ. ಆದರೆ ಅರಕಾನೀಸರು ಈ ಪಟ್ಟಣದ ಮೇಲೆ ತಮ್ಮ ಆಧಿಪತ್ಯವನ್ನು ಸಾಧಿಸುತ್ತಲೇ ಬಂದರು. 1638ರಲ್ಲಿ ಅರಕಾನೀಸರ ಮತಕ್ ರಾಜ ಎಂಬುವನು ಆರಕಾನೀಸ್ ದೊರೆಯ ವಿರುದ್ಧ ಬಂಡೆದ್ದು ಮೊಗಲರ ರಕ್ಷಣೆಯನ್ನು ಕೋರಿದ. ಮೊಗಲ್ ಗವರ್ನರ್ ಆಗಿದ್ದ ನವಾಬ್ ಷಹಿಸ್ತಾಖಾನ್ ಈ ಪಟ್ಟಣವನ್ನು ಅಂತಿಮವಾಗಿ 1666ರಲ್ಲಿ ವಶಪಡಿಸಿಕೊಂಡ. ಇದಕ್ಕೆ ಇಸ್ಲಾಮಾಬಾದ್ ಎಂದು ನಾಮಕರಣವಾಯಿತು. ಚಿತ್ತಗಾಂಗ್ ಜಿಲ್ಲೆಯೂ ಮೊಗಲರ ವಶವಾಯಿತು.

	ಈ ರೇವು 16ನೆಯ ಶತಮಾನದಲ್ಲಿ ಪೋರ್ಚುಗೀಸರ ಕಡಲುಗಳ್ಳ ವ್ಯಾಪಾರದ ಕೇಂದ್ರವಾಗಿತ್ತು. ವೆನಿಷಿಯನ್ ನಾವಿಕ ಜೊವೊ ಡಿ ಬಾರೋಸ್ 1552ರಲ್ಲಿ ಇದನ್ನು ಬಂಗಾಲ ರಾಜ್ಯದ ಅತ್ಯಂತ ಪ್ರಸಿದ್ಧವಾದ ಮತ್ತು ಸಂಪದ್ಭರಿತವಾದ ನಗರ ಎಂದು ವರ್ಣಿಸಿದ. 1685ರಲ್ಲಿ ಈಸ್ಟ್ ಎಂಡಿಯ ಕಂಪನಿ ಅಡ್ಮಿರಲ್ ನಿಕೋಲ್ಸನ್ನನ ನೇತೃತ್ವದಲ್ಲಿ ಚಿತ್ತಗಾಂಗನ್ನು ಆಕ್ರಮಿಸಲು ಪ್ರಯತ್ನಿಸಿ ವಿಫಲಗೊಂಡಿತು. 1760ರಲ್ಲಿ ಚಿತ್ತಗಾಂಗನ್ನು ನವಾಬ್ ಮೀರ್ ಕಾಸಿಂ ಅಲಿ ಈಸ್ಟ್ ಇಂಡಿಯ ಕಂಪನಿಗೆ ಒಪ್ಪಿಸಿದ.

	1864ರಲ್ಲಿ ಇದು ಪೌರಸಭಾ ನಗರವಾಯಿತು. ಅಸ್ಸಾಂ-ಬಂಗಾಲಗಳ ನಡುವೆ ರೈಲುಮಾರ್ಗ ನಿರ್ಮಾಣವಾದ ಮೇಲೆ ಇದು ಬೆಳೆಯತೊಡಗಿತು. ಭಾರತದ ವಿಭಜನೆಯಾದಾಗ (1947) ಇದು ಪೂರ್ವ ಪಾಕಿಸ್ತಾನದಲ್ಲಿ ಸೇರಿತು. ಬಾಂಗ್ಲಾದೇಶದ ವಿಮೋಚನೆಯಾದ ಮೇಲೆ ಇದು ಆ ದೇಶದ ಮುಖ್ಯ ಬಂದರಾಗಿ ಮುಂದುವರಿಯುತ್ತಿದೆ.

	ಚಿತ್ತಗಾಂಗ್ ಜಿಲ್ಲೆ: ಇದು ಬಂಗಾಳ ಕೊಲ್ಲಿಯ ಈಶಾನ್ಯದಲ್ಲಿ ಕಣಿವೆಗಳಿಂದಲೂ ತಗ್ಗಾದ ಸಮಾತಂರ ಬೆಟ್ಟಸಾಲುಗಳಿಂದಲೂ ಕೂಡಿದ ಕಿರಿ ಅಗಲದ ಕರಾವಳಿ ಪ್ರದೇಶವನ್ನೊಳಗೊಂಡಿದೆ. ಇದರ ⅓ ಭಾಗ ಅರಣ್ಯದಿಂದ ಕೂಡಿದೆ. ಕಾಡಿನಲ್ಲಿ ಆನೆ, ಕಾಡೆಮ್ಮೆ, ಹುಲಿ, ಚಿರತೆ, ಜಿಂಕೆ, ಕಾಡುಬೆಕ್ಕು ಮುಂತಾದ ಪ್ರಾಣಿಗಳಿವೆ.

	ಜಿಲ್ಲೆಯ ವಿಸ್ತೀರ್ಣ 2,705 ಚ.ಮೈ. ಜನಸಂಖ್ಯೆ 29,82,931(1961). ಇಲ್ಲಿಯ ವಾಯುಗುಣ ಹಿತಕರವಾದ್ದು. ಇಲ್ಲಿಯ ಭೂಮಿ ಹೆಚ್ಚಾಗಿ ಜೇಡಿ ಮರಳು, ಜೇಡಿಪದರ ಕಲ್ಲು ಹಾಗೂ ಬಿಳಿಕಲ್ಲಿನಿಂದ ಕೂಡಿದ್ದು. ಬೆಟ್ಟಸಾಲುಗಳ ನಡುವೆ ಇರುವ ಕಣಿವೆಗಳು ಫಲವತ್ತಾದ ಮಣ್ಣಿನಿಂದ ಕೂಡಿ ವ್ಯವಸಾಯಯೋಗ್ಯವಾಗಿವೆ. ಬೇಸಗೆಯಲ್ಲಿ ಮುಂಗಾರು ಮಾರುತಗಳಿಂದ ಅಧಿಕವಾಗಿ ಮಳೆಯಾಗುತ್ತದೆ. ವರ್ಷಕ್ಕೆ ಮಳೆ 100" ಗಿಂತಲೂ ಅಧಿಕ. ಆಗಾಗ್ಗೆ ಚಂಡಮಾರುತಗಳು ಬೀಸುವುದುಂಟು. ಸೆಣಬು, ಬತ್ತ, ಕಬ್ಬು, ಹೊಗೆಸೊಪ್ಪು,ಚಹ ಮುಖ್ಯ ಬೆಳೆಗಳು. ಚಹ ತೋಟಗಳು ತಗ್ಗು ಬೆಟ್ಟಗಳ ಇಳಿಜಾರಿನಲ್ಲಿ ಹೆಚ್ಚಾಗಿ ವ್ಯಾಪಿಸಿವೆ.

	ಚಿತ್ತಗಾಂಗ್ ಗುಡ್ಡಗಾಡು ಜಿಲ್ಲೆ: ಚಿತ್ತಗಾಂಗ್ ಜಿಲ್ಲೆಗೂ ಅಸ್ಸಾಮಿನ ಲುಷೈ ಬೆಟ್ಟಗಳಿಗೂ ನಡುವೆ ಇರುವ ಪ್ರದೇಶ. ವಿಸ್ತೀರ್ಣ 5,093 ಚ.ಮೈ. ಜನಸಂಖ್ಯೆ 3,85,079 (1961). ಕಿಯೊ ಕರಾದಂಗ್ (4,034') ಮತ್ತು ಪಿರಮಿಡ್ (3,017') ಅತ್ಯಂತ ಎತ್ತರದ ಬೆಟ್ಟಗಳು. ಬೆಟ್ಟಗುಡ್ಡಗಳಿಂದ ಕೂಡಿದ ಈ ಪ್ರದೇಶದ ಹೆಚ್ಚು ಭಾಗ ಸಾಗುವಳಿಗೆ ಯೋಗ್ಯವಾಗಿಲ್ಲ. ಇಲ್ಲಿ ಉಷ್ಣತೆ ಹೆಚ್ಚು; ವಾತಾವರಣದಲ್ಲಿ ತೇವಾಂಶ ಅಧಿಕ. ನದಿಗಳೇ ಇಲ್ಲಿಯ ಮುಖ್ಯ ಸಂಪರ್ಕ ಮಾಧ್ಯಮಗಳು. ಕರ್ನಫೂಲಿ ಯೋಜನೆಯ ಅಡಿಯಲ್ಲಿ ಕಪ್ತಾಯ್ ಎಂಬಲ್ಲಿ ಕಟ್ಟೆಯೊಂದನ್ನು ಕಟ್ಟಲಾಗಿದೆ. ಹತ್ತಿ ಬಟ್ಟೆ ನೇಯುವುದು, ಬಿದಿರುಗೆಲಸ ಮುಖ್ಯ ಗುಡಸಲು ಕೈಗಾರಿಕೆಗಳು. ಬತ್ತ, ಹತ್ತಿ, ಚಹ, ಹೊಗೆಸೊಪ್ಪು, ಕಬ್ಬು ಮುಖ್ಯ ಬೆಳೆಗಳು.

	ಚಿತ್ತಗಾಂಗ್ ವಿಭಾಗ: ಇದು ಬಾಂಗ್ಲಾ ದೇಶದ ನಾಲ್ಕು ಆಡಳಿತ ವಿಭಾಗಗಳಲ್ಲಿ ಒಂದು. ಚಿತ್ತಗಾಂಗ್, ನೌಖಾಲಿ, ಚಿತ್ತಗಾಂಗ್ ಗುಡ್ಡಗಾಡು, ಕೊಮಿಲ್ಲಾ ಮತ್ತು ಸಿಲ್ಹೆಟ್ ಜಿಲ್ಲೆಗಳು ಈ ವಿಭಾಗಕ್ಕೆ ಸೇರಿವೆ. ಇದರ ಆಡಳಿತ ಕೇಂದ್ರ ಚಿತ್ತಗಾಂಗ್ ನಗರ. ಈ ವಿಭಾಗದ ವಿಸ್ತೀರ್ಣ 17,017 ಚ.ಮೈ.						(ಡಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ